ಉಂಗುರ ನೆಬ್ಯುಲ- ಲೈರಾ ನಕ್ಷತ್ರ ಪುಂಜದಲ್ಲಿರುವ ಗ್ರಹಾತ್ಮಕ ನೀಹಾರಿಕೆ (ಪ್ಲಾನೆಟರಿ ನೆಬ್ಯುಲ) (M57 ಅಥವಾ NGC6720). ನಮ್ಮ ದೃಷ್ಟಿರೇಖೆಗೆ ಲಂಬತಳದಲ್ಲಿ ವಿಕ್ಷೇಪಗೊಳ್ಳುವ ಈ ನೆಬ್ಯುಲದ ಆಕಾರ ಉಂಗುರದಂತೆಯೇ ಕಾಣುತ್ತದೆ. ಕೇಂದ್ರದಲ್ಲಿ ಪ್ರಖರ ನಕ್ಷತ್ರದಿಂದ ವಿಸರಣೆಗೊಳ್ಳುವ ಅತಿನೇರಿಳೆ ರಶ್ಮಿಪುಂಜ ಉಂಗುರಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ಆಕ್ಸಿಜನ್ ಮೇಲೆ ಪತನವಾಗಿ ಅದನ್ನು ಹೊಳೆಯುವಂತೆ ಮಾಡುವುದು. ಸಾಪೇಕ್ಷವಾಗಿ ಉಂಗುರದ ಒಳಭಾಗ ಮಸಕು. ಸೂರ್ಯನಂಥ ನಕ್ಷತ್ರದ ಅವಸಾನದ ಸ್ಥಿತಿಯನ್ನು ಈ ನೀಹಾರಿಕೆ ಕಾಯ ಸೂಚಿಸುತ್ತದೆ. ಅರ್ಧಕ್ಕಿಂತಲೂ ಹೆಚ್ಚು ವಸ್ತು ಸಿಡಿದು ಈ ವರ್ಣಮಯ ನೀಹಾರಿಕೆಯನ್ನು ಸೃಷ್ಟಿಸಿದೆ. ಉಳಿದ ಭಾಗ ಕೇಂದ್ರದಲ್ಲಿ ಶ್ವೇತಕುಬ್ಜವಾಗಿದೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ